ಹೆಸರಾಯಿತು ಕರ್ನಾಟಕ
ಚೆನ್ನವೀರ ಕಣವಿ
ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ
ಹುಸಿಹೋಗದ ಕನ್ನಡ
ಹೊಸೆದ ಹಾಗೆ ಹುರಿಗೊಳ್ಳುವ
ಗುರಿ ತಾಗುವ ಕನ್ನಡ;
ಕುರಿತೋದದ ಪರಿಣತಮತಿ -
ಅರಿತವರಿಗೆ ಹೂಗೊಂಡ
ಪಡುಗಡಲಿನ ತೆರೆಗಳಂತೆ
ಹೆಡೆ ಬಿಚ್ಚುತ ಮೊರೆಯುವ
ಸಹ್ಯಾದ್ರಿಯ ಶಿಖರದಂತೆ
ಬಾನೆತ್ತರ ಕರೆಯುವ
ಗುಡಿ - ಗೋಪುರ ಹೊಂಗಳಸಕೆ
ಚೆಂಬೆಳಕಿನ ಕನ್ನಡ;
ನಮ್ಮೆಲ್ಲರ ಮೈಮನಸಿನ
ಹೊಂಗನಸಿನ ಕನ್ನಡ
ತ್ರಿಪದಿಯಿಂದ ಸಾಸಿರಪದಿ
ಸ್ವಚ್ಛಂದದ ಉಲ್ಲಾಸ
ಭಾವಗೀತೆ, ಮಹಾಕಾವ್ಯ -
ವೀರ - ವಿನಯ ಸಮರಸ
ಹಳ್ಳಿ - ಊರು, ನಗರ - ಜಿಲ್ಲೆ
ಮೊಗದ ಹೊಗರು ಕನ್ನಡಿ;
ಎಲ್ಲ ದಿಸೆಗು ಚೆಲ್ಲುವರಿದ
ಚೈತನ್ಯದ ದಾಂಗುಡಿ